ಗರ್ಭೋಪನಿಷತ್

ಗರ್ಭೋಪನಿಷತ್
ಪರಿಚಯಾತ್ಮಕ ಲೇಖನ




ಪ್ರಸ್ತುತ ಸಮಯದಲ್ಲಿ ಉಪನಿಷತ್ತುಗಳು ಅತ್ಯಂತ ಜನಪ್ರಿಯ ಹಾಗೂ ವೇದಗಳ ಮೆಚ್ಚುಗೆಯ ಭಾಗ. ಉಪನಿಷತ್ತುಗಳು ಜ್ಞಾನಕಾಂಡದ ಭಂಡಾರ. ಸಮಸ್ತ ಮಹಾವಾಕ್ಯಗಳೂ ಇವುಗಳಲ್ಲಿವೆ. ಮುಖ್ಯವಾಗಿ ಉಪನಿಷತ್ತುಗಳು ತತ್ತ್ವಶಾಸ್ತ್ರವನ್ನು ಪ್ರತಿಪಾದಿಸುತ್ತವೆ. ಅಲ್ಲದೇ ಉಪನಿಷತ್ತುಗಳಲ್ಲಿ ಕೆಲವು ಕಡೆ ವೈಜ್ಞಾನಿಕ ತತ್ತ್ವಗಳೂ ಅಡಗಿರುವುದು.

108 ಉಪನಿಷತ್ತುಗಳೂ ನಾಲ್ಕು ವೇದಗಳಲ್ಲಿ ಕಂಡುಬರುವುದು. ಅವುಗಳಲ್ಲಿ -
ಸಾಮವೇದದಲ್ಲಿ - 16
ಶುಕ್ಲಯಜುರ್ವೇದದಲ್ಲಿ - 29
ಋಗ್ವೇದದಲ್ಲಿ - 10
ಅಥರ್ವವೇದದಲ್ಲಿ - 21
ಕೃಷ್ಣ ಯಜುರ್ವೇದದಲ್ಲಿ - 32
ಇವುಗಳಲ್ಲಿ ಗರ್ಭೋಪನಿಷತ್ ಸಹ ಒಂದು. ಇದು ಕೃಷ್ಣ ಯಜುರ್ವೇದದಲ್ಲಿ ಬರುವುದು. ಇದು ಅತಿ ಕಿರಿದಾದ ಉಪನಿಷತ್ತು ಹಾಗೂ ಇದರಲ್ಲಿ ಮುಖ್ಯವಾಗಿ ನಾಲ್ಕು ಶ್ಲೋಕಗಳಿದ್ದು ಅದರೊಂದಿಗೆ ಒಂಬತ್ತು ವಿವರಣಾತ್ಮಕ ಶ್ಲೋಕಗಳಿರುವುದು. ಈ ಉಪನಿಷತ್ತಿನ ಸಂಪೂರ್ಣ ಪಾಠವು (ಕನ್ನಡದಲ್ಲಿ) https://sanskritdocuments.org/doc_upanishhat/garbha.html?lang=kn ನಲ್ಲಿ ನೋಡಬಹುದು.
ಗರ್ಭೋಪನಿಷತ್ತಿನಲ್ಲಿ ಗರ್ಭದ ವಿಷಯವಾಗಿ ವಿಸ್ತಾರವಾದ ವೈಜ್ಞಾನಿಕ ವಿವರಣೆ ಇರುವುದು. ಈ ವಿಷಯಗಳನ್ನು ಎಲ್ಲರೂ ಅರಿಯಲೇ ಬೇಕು. ಅವುಗಳ ಬಗ್ಗೆ ಸಂಕ್ಷೇಪವಾಗಿ ಪ್ರಸ್ತುತಿ ಪಡಿಸಲು ಬಯಸುವೆ.
ಮೊದಲಿಗೆ ಈ ಉಪನಿಷತ್ತಿನಲ್ಲಿ ಗರ್ಭೋತ್ಪತ್ತಿ, ಅದರ ಬೆಳವಣಿಗೆಯ ವಿಚಾರವನ್ನು ಅತ್ಯಂತ ಸೂಕ್ಷ್ಮವಾಗಿ ವಿವರಿಸಲಾಗಿದೆ. ಮೊದಲನೇ ಶ್ಲೋಕವು ಹೀಗಿದೆ :
“ಪಂಚಾತ್ಮಕಂ ಪಂಚಸು ವರ್ತಮಾನಮ್
ಷಡಾಶ್ರಯಂ ಷಡ್ಗುಣಯೋಗಯುಕ್ತಮ್
ತಂ ಸಪ್ತಧಾತುಂ ತ್ರಿಮಲಂ ದ್ವಿಯೋನಿಮ್
ಚತುರ್ವಿಧಾಹಾರಮಯಂ ಶರೀರಮ್||

ಮಾನವ ಶರೀರವು ಪಂಚಭೂತಗಳಿಂದ ನಿರ್ಮಿಸಲ್ಪಟ್ಟಿದೆ ಹಾಗೂ ಪಂಚೇಂದ್ರಿಯಗಳಿಂದ ಕೂಡಿದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಮುಂದುವರೆದು, ಆರು ಆಶ್ರಯಗಳಿಂದ ಕೂಡಿದ ಈ ಶರೀರವು ಆರು ಗುಣಗಳು, ಏಳು ಧಾತು, ಮೂರು ಮಲ, ಎರಡು ಯೋನಿ ಹಾಗೂ ನಾಲ್ಕು ರೀತಿಯ ಆಹಾರಗಳಿಂದ ರೂಪಿತಗೊಂಡಿದೆ. ಇವುಗಳ ಬಗ್ಗೆ ಮತ್ತಷ್ಟು ವಿವರಗಳನ್ನು ನೋಡೋಣ -
ಪಂಚ ಭೂತಗಳಾದ ಉಷ್ಣತೆ, ಪೃಥ್ವೀ, ಆಕಾಶ, ವಾಯು, ನೀರು - ಇವುಗಳು ಸಾಂಕೇತಿಕವಾಗಿ ಈ ಶರೀರದಲ್ಲಿ ಅಡಗಿರುವ ಅಂಶಗಳೆಂದರೆ, ಕಠಿಣವಾದ ಅಂಶವೇ ಪೃಥ್ವಿ, ದ್ರವರೂಪದಲ್ಲಿರುವುದೇ ನೀರು, ಶಾಖವೇ ಅಗ್ನಿ, ಸಂಚರಿಸುವುದೇ ವಾಯು.
ಇಲ್ಲಿ ಸಂಚಾರಕ್ಕಾಗಿ ವಾಯು, ಪ್ರಕಾಶಕ್ಕಾಗಿ ಅಗ್ನಿ, ಸಮತೋಲನಕ್ಕಾಗಿ ದ್ರವರೂಪವಾದ ನೀರು, ಅವಕಾಶಮಾಡಿಕೊಡುವುದಕ್ಕಾಗಿ ಆಕಾಶ ಹಾಗೂ ವಸ್ತುವಿನ ಧಾರಣೆಯಾಗಿ ಪೃಥ್ವಿ ಸಾಧನವಾಗಿದೆ. ಇದನ್ನೇ ಮತ್ತೊಂದು ರೀತಿಯಲ್ಲಿ, ಶ್ರವಣಕ್ಕಾಗಿ ಕಿವಿ, ಸ್ಪರ್ಶಕ್ಕಾಗಿ ಚರ್ಮ, ರುಚಿಯನ್ನು ಅರಿಯಲು ನಾಲಗೆ, ವಾಸನೆಯನ್ನು ಗ್ರಹಿಸಲು ನಾಸಿಕ ಹಾಗೂ ದರ್ಶನಕ್ಕಾಗಿ ಕಣ್ಣು ಎಂದು ಪರಿಗಣಿಸಬಹುದು.
ಮಾನವನ ಶರೀರವು ಪಂಚ ಜ್ಞಾನೇಂದ್ರಿಯ ಹಾಗೂ ಪಂಚ ಕರ್ಮೇಂದ್ರಿಯಗಳಿಂದ ಕೂಡಿದೆ. ಜ್ಞಾನೇಂದ್ರಿಯಗಳು - ಕಣ್ಣು, ಕಿವಿ, ಮೂಗು, ನಾಲಗೆ ಹಾಗೂ ಚರ್ಮಗಳಾದರೆ, ಪಂಚ ಕರ್ಮೇಂದ್ರಿಯಗಳು - ಮಾತನಾಡಲು ಬಾಯಿ, ಚಲಿಸಲು ಕಾಲುಗಳು, ಕೆಲಸಮಾಡಲು ಕೈಗಳು, ಮಲ-ಮೂತ್ರ ವಿಸರ್ಜನೆಗೆ ಗುಪ್ತಾಂಗಗಳು ಹಾಗೂ ಸಂತೋಷದ ಅನುಭವಕ್ಕೆ ಮನಸ್ಸು. (ಬುದ್ಧಿಯಿಂದ ಅರ್ಥಮಾಡಿಕೊಳ್ಳುವುದು ಮತ್ತು ನಿರ್ಣಯವನ್ನು ತೆಗೆದುಕೊಳ್ಳುವುದು, ಮನಸ್ಸಿನಿಂದ ಚಿಂತಿಸುವುದು ಹಾಗೂ ಕಲ್ಪಿಸುವುದು, ಚಿಂತನೆಯಿಂದ ಪುನಃಸ್ಮರಣೆ, ಅಹಂಕಾರದಿಂದ ಅಹಂಭಾವದ ಅನುಭವವುಂಟಾಗುವುದು).
“ಆರು ಆಶ್ರಯಗಳು
ಷಡಾಶ್ರಯಮಿತಿ ಕಸ್ಮಾತ್
ಮಧುರಃ ಆಮ್ಲ ಲವಣ ತಿಕ್ತ ಕಟು ಕಷಾಯ ರಸಾನ್ವಿಂದತೀತಿ
ಷಡ್ಜ ಋಷಭ ಗಾಂಧಾರ ಮಧ್ಯಮ ಪಂಚಮ ದೈವತ ನಿಷಾದಾಃ ಚ ಇತಿ
ಇಷ್ಟಾನಿಷ್ಟ ಶಬ್ದಸಂಜ್ಞಾ ಪ್ರಣಿಧಾನಾದೃಶವಿಧಾ ಭವಂತಿ
ಶುಕ್ಲೋ ರಕ್ತಃ ಕೃಷ್ಣೋ ಧೂಮ್ರಃ ಪೀತಃ ಕಪಿಲಃ ಪಾಂಡರ ಇತಿ ||”

ಸಿಹಿ (ಮಧುರ), ಹುಳಿ, ಉಪ್ಪು, ಕಹಿ,ಖಾರ, ವಗರು - ಈ ಆರು ರುಚಿಗಳು ಶರೀರಕ್ಕೆ ಆಶ್ರಯವಾಗಿವೆ. ಹಾಗೇ ಶರೀರಕ್ಕೆ ಆರು ಸ್ಥಿತಿಗಳೂ ಇವೆ - ಅಸ್ತಿತ್ವ ,ಹುಟ್ಟು, ಬೆಳವಣಿಗೆ, ಪ್ರಬುದ್ಧತೆ, ಕ್ಷೀಣತೆ ,ಹಾಗೂ ಸಾವು. ಧಮನಿಯನ್ನು ಆರಂಭಿಸಿ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧ ಮತ್ತು ಆಜ್ಞಾ ಎಂಬ ಆರು ಚಕ್ರಗಳಿವೆ. ಹಾಗೆಯೇ ಶರೀರವು ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದ ಎಂಬ ಸಪ್ತ ಸ್ವರಗಳಿಂದ ಕೂಡಿದೆ. ಮುಂದುವರೆದು, ಶುಕ್ಲ, ರಕ್ತ, ಕೃಷ್ಣ, ಧೂಮ, ಪೀತ, ಕಪಿಲ, ಪಾಂಡರ - ಇವು ಶರೀರದಲ್ಲಿನ ಸಪ್ತಧಾತುಗಳು. ನೋಡಿದಿರಾ ನಮ್ಮ ಶರೀರವು ಏನೆಲ್ಲವನ್ನೂ ಒಳಗೊಂಡಿದೆ ಎಂಬುದು - ಇದು ಆಶ್ಚರ್ಯಕರವಾದ ವಿಷಯವಲ್ಲವೇ ?

ಮುಂದುವರೆದು ನಮ್ಮ ಶರೀರದಲ್ಲಿನ ಇತರ ರೂಪಾಂತರಗಳನ್ನು ಗರ್ಭೋಪನಿಷತ್ತಿನಲ್ಲಿ ವಿವರಿಸಿರುವುದನ್ನು ನೋಡೋಣವೆ:- 
ನಮ್ಮ ಶರೀರದಲ್ಲಿನ ಆರು ರಸಗಳು ರೂಪಾಂತರಗೊಳ್ಳುವುದು - ರಸಗಳಿಂದ ರಕ್ತವೂ, ರಕ್ತದಿಂದ ಮಾಂಸ, ಮಾಂಸದಿಂದ ಮೇದ, ಮೇದದಿಂದ ಸ್ನಾಯುಗಳು, ಸ್ನಾಯುಗಳಿಂದ ಅಸ್ಥಿಗಳು ಉತ್ಪನ್ನವಾಗುವುದು. ಅಸ್ಥಿಗಳಿಂದ ಮಜ್ಜೆ, ಮಜ್ಜೆಯಿಂದ ಶುಕ್ರ (ವೀರ್ಯ) ತಯಾರಾಗುತ್ತದೆ. ವೀರ್ಯ ಮತ್ತು ಅಂಡಾಣುವಿನ ಸಂಯೋಗದಿಂದ ಗರ್ಭಾಂಕುರವಾಗುತ್ತದೆ. ಇದು ಶರೀರವನ್ನು ರೂಪಿಸುತ್ತದೆ. ಎಲ್ಲ ಶರೀರದಲ್ಲೂ ಅಂತರಗ್ನಿಯೂ, ಅಂತರಗ್ನಿಯೊಂದಿಗೆ ಪಿತ್ತರಸವೂ, ಪಿತ್ತರಸದಲ್ಲಿ ವಾಯುವೂ, ವಾಯುವಿನೊಂದಿಗೆ ಹೃದಯ ಅಥವಾ ಆತ್ಮವೂ ಇರುತ್ತದೆ.

ಇನ್ನು ಗರ್ಭಾಂಕುರವಾದ ಮೇಲೆ ಮುಂದಿನ ಬೆಳವಣಿಗೆಯನ್ನು ಗಮನಿಸೋಣ :
ಮೊದಲನೆಯ ರಾತ್ರಿ ಗರ್ಭದಲ್ಲಿರುವ ಭ್ರೂಣವು ನೀರಿನಂತಿರುತ್ತದೆ. 7 ದಿನಗಳಲ್ಲಿ ಅದು ಗುಳ್ಳೆಗಳಾಗಿ ಮಾರ್ಪಾಡಾಗುತ್ತದೆ. ಹದಿನೈದು ದಿನದಲ್ಲಿ ಅದು ಚೆಂಡಿನಾಕಾರವನ್ನು ಹೊಂದುವುದು. ಒಂದು ತಿಂಗಳಿನಲ್ಲಿ ಕಠಿಣತೆಯ ಸ್ವರೂಪವನ್ನು ಪಡೆಯುವುದು. ಎರಡು ತಿಂಗಳಿನಲ್ಲಿ ತಲೆಯ ಭಾಗ ಹಾಗೂ ಮೂರನೇ ತಿಂಗಳಲ್ಲಿ ಪಾದವು ರೂಪುಗೊಳ್ಳುವುದು. ನಾಲ್ಕು ತಿಂಗಳಲ್ಲಿ ಗುಲ್ಭ, ಜಠರ ಹಾಗೂ ಸೊಂಟದ ಭಾಗವು ಸೃಷ್ಟಿಯಾಗುವುದು. ಐದನೇ ತಿಂಗಳಿನಲ್ಲಿ ಬೆನ್ನೆಲುಬು ಮೂಡುವುದು. ಆರನೇ ತಿಂಗಳಲ್ಲಿ ಮುಖ, ಮೂಗು, ಕಣ್ಣುಗಳು, ಕಿವಿಗಳು ರೂಪುಗೊಳ್ಳುವುದು. ಏಳನೇ ತಿಂಗಳಿನಲ್ಲಿ ಜೀವದೊಂದಿಗೆ ಸಂಬಂಧವುಂಟಾಗುವುದು. ಎಂಟನೇ ತಿಂಗಳಿನಲ್ಲಿ ಸರ್ವಾಂಗಲಕ್ಷಣಗಳೂ ಕೂಡಿಕೊಳ್ಳುತ್ತದೆ. ಒಂಬತ್ತನೇ ತಿಂಗಳಿನಲ್ಲಿ ಇವೆಲ್ಲವೂ ಪುಷ್ಟಿಗೊಂಡು ಸಮಗ್ರ ಶರೀರವು ಮೈತಳೆಯುತ್ತದೆ.

ವೀರ್ಯಾಣು ಪುರುಷನಿಗೆ ಹಾಗೂ ಅಂಡಾಣುವು ಮಹಿಳೆಗೆ ಸಂಬಂಧಿಸಿದ್ದಾಗಿದೆ. ಇವೆರಡೂ ತಂತಾನೇ ಶಕ್ತಿಹೀನ, ಆದರೆ ಇವೆರಡರ ಸಂಯೋಗದಿಂದ ಸೃಷ್ಟಿ ಕ್ರಿಯೆಯು (ಭ್ರೂಣವಾಗಿ) ಪ್ರಾರಂಭವಾಗುವುದು. ಪುರುಷನ ವೀರ್ಯಾಣುವು ಅಧಿಕವಿದ್ದಲ್ಲಿ ಗಂಡು, ಸ್ತ್ರೀಯ ಅಂಡಾಣು ಅಧಿಕವಿದ್ದಲ್ಲಿ ಹೆಣ್ಣುಮಗುವೂ ಜನ್ಮತಾಳುತ್ತದೆ. ಅವೆರಡೂ ಸಮವಾಗಿದ್ದಲ್ಲಿ ನಪುಂಸಕತ್ವವು ಉಂಟಾಗುವುದು. ಆಯಾ ಕೆಲಸದ ಪರಿಣಾಮವು “ಕರ್ತಾ”ನ ಮನಃಸ್ಥಿತಿಯನ್ನವಲಂಬಿಸುವುದರಿಂದ ಶಿಶುವೂ ಕೂಡಾ ಮಾತಾಪಿತೃಗಳ ಚಿಂತನೆಗನುಸಾರವಾಗಿಯೇ ಹುಟ್ಟುತ್ತದೆ.

ಅನಂತರ ಒಂಬತ್ತನೆಯ ತಿಂಗಳಲ್ಲಿ ಪಂಚಮಹಾಭೂತಗಳಿಂದ ನಿರ್ಮಿಸಲ್ಪಟ್ಟ ಈ ಶರೀರವು ಗಂಧರಸಗಳ ಜ್ಞಾನವನ್ನೂ ಆಧ್ಯಾತ್ಮದ ಅಗ್ನಿಯಿಂದ ತೇಜಸ್ಸನ್ನೂ ಪಡೆದುಕೊಳ್ಳುತ್ತದೆ. ಅದಾದ ನಂತರ ಆ ಶರೀರದಲ್ಲಿ 8 ಪ್ರಕೃತಿಗಳೂ 16 ವಿಕಾರಗಳೂ ಉಂಟಾಗುತ್ತವೆ. ತಾಯಿಯ ನಾಡಿಯಿಂದ ಜಲಾಹಾರಗಳು ಪೂರೈಕೆಯಾಗುತ್ತದೆ. ಅನಂತರ ಆ ಶರೀರದಲ್ಲಿ ಪ್ರಾಣವು ಉದ್ಭವಿಸುತ್ತದೆ. ಹೀಗೆ ಒಂಬತ್ತನೇ ತಿಂಗಳಲ್ಲಿ ಸರ್ವಲಕ್ಷಣಯುಕ್ತವಾದ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು ಸಂಪೂರ್ಣವಾಗಿ ಶರೀರವನ್ನು ಆವರಿಸುತ್ತವೆ. ನಂತರ ಪೂರ್ವಜನ್ಮದ ಸ್ಮೃತಿಯುಂಟಾಗುತ್ತದೆ. ಹಿಂದೆ ಏನನ್ನು ಮಾಡಿದ್ದೇನೆ, ಏನನ್ನು ಮಾಡಿಲ್ಲ ಎಂಬುದನ್ನು ತಿಳಿದು ಸತ್ಕರ್ಮ, ದುಷ್ಕರ್ಮಗಳ ಭೇದದ ಅರಿವು ಉಂಟಾಗುತ್ತದೆ.

ಅಗ್ನಿಯು ಇಲ್ಲಿ ಕ್ಷೀಣಿಸುತ್ತದೆ. ಶರೀರಾಗ್ನಿಯಲ್ಲಿ ಶರೀರತ್ರಯ, ರೇತತ್ರಯ, ಪುರತ್ರಯ, ಧಾತುತ್ರಯಗಳು ಇರುತ್ತವೆ. ಇವುಗಳಲ್ಲಿ ಶರೀರರಹಿತವಾದ ವೈಶ್ವಾನರವಿದೆ. ಅಗ್ನಿಯಲ್ಲಿ ಮೂರು ವಿಧ - ಜ್ಞಾನಾಗ್ನಿ, ದರ್ಶನಾಗ್ನಿ (ನೇತ್ರಾಗ್ನಿ) ಕೋಷ್ಠಾಗ್ನಿ (ಜೀರ್ಣಾಗ್ನಿ). ಇವುಗಳಲ್ಲಿ ಜ್ಞಾನಾಗ್ನಿಯು ಮನಸ್ಸಿಗೆ ಸಂಬಂಧಪಟ್ಟದ್ದು. ದರ್ಶನಾಗ್ನಿಯು ಇಂದ್ರಿಯ ಸಂಬಂಧಿತವೂ, ಕೋಷ್ಠಾಗ್ನಿಯು ಉದರ ಸಂಬಂಧಿತವೂ ಆಗಿರುತ್ತದೆ. ಅಶಿತಪೀತಲೇಹ್ಯಚೋಷ್ಯಾದಿಗಳಿಂದ (ವಿವಿಧ ಮಾದರಿಗಳಲ್ಲಿ) ತೆಗೆದುಕೊಂಡಿರುವ ಆಹಾರವು ಜೀರ್ಣವಾಗಲು ಹಾಗೂ ಪ್ರಾಣಾಪಾನಗೊಳ್ಳಲು ಈ ಕೋಷ್ಠಾಗ್ನಿಯು ಸಹಕರಿಸುತ್ರದೆ. ಕಣ್ಣಿನಲ್ಲಿರುವ ದರ್ಶನಾಗ್ನಿಯು ವಸ್ತುಗಳ ದರ್ಶನಕ್ಕೆ ಸಹಕಾರಿಯಾಗುತ್ತದೆ. ಆಧ್ಯಾತ್ಮನೇತ್ರವು ಇದರ ಮೂಲಸ್ಥಾನ. ಯಾವುದು ಶುಭ, ಯಾವುದು ಅಶುಭ ಎನ್ನುವ ವಿವೇಕವನ್ನು ಜ್ಞಾನಾಗ್ನಿಯು ಕೊಡುತ್ತದೆ. ದಕ್ಷಿಣಾಗ್ನಿಯು ಹೃದಯದಲ್ಲೂ, ಗಾರ್ಹಪತ್ಯವು ಉದರದಲ್ಲೂ, ಆಹವನೀಯವು ಮುಖದಲ್ಲೂ ಇರುತ್ತದೆ.

ಈ ಎಲ್ಲ ಅಗ್ನಿಗಳಿಂದ ಮಾಡಲ್ಪಟ್ಟಿರುವ ಯಜ್ಞಕ್ಕೆ ಆತ್ಮವೇ ಯಜಮಾನ. ಮನಸ್ಸಿನ ಬಾಹ್ಯ, ಧೃತಿ, ಸಂತೋಷಗಳು ದೀಕ್ಷೆ, ಲೋಭ ಇತ್ಯಾದಿಗಳೇ (ಬಲಿ) ಪಶುಗಳು. ಬುದ್ಧಿ, ಇಂದ್ರಿಯಗಳೇ ಯಜ್ಞಪಾತ್ರೆಗಳು, ಕರ್ಮೇಂದ್ರಿಯಗಳೇ ಹವಿಸ್ಸುಗಳು. ಈ ಯಜ್ಞದಲ್ಲಿ ಶರೀರವೇ ಯಜ್ಞಭೂಮಿ. ತಲೆಯ ಕಪಾಲಭಾಗವೇ ಅಗ್ನಿಸ್ಥಾಪನಸ್ಥಳ. ಕೇಶಗಳೇ ದರ್ಭೆಗಳು. ಮುಖವೇ ಅಂತರ್ವೇದ. ಆಯುಷ್ಯವೇ ಯಜ್ಞದ ಅವಧಿ. ಹೃದಯದಲ್ಲಿ ಉಂಟಾಗುವ ಮಿಡಿತವೇ ಸಾಮವೇದ. ವೈಖರಿಯೇ ಯಜುರ್ವೇದ. ಪರಾ, ಪಶ್ಯಂತೀ, ಮಧ್ಯಮಗಳೇ ಋಗ್ವೇದ, ರೂಕ್ಷವಚನಗಳೇ ಅಥರ್ವ ಮತ್ತು ಖಿಲಗಳು. ಸತ್ಯವಚನಗಳೇ ವ್ಯಾಹೃತವು. ಮೃತ್ಯುವೇ ಅವಭೃತಸ್ನಾನ. ಈ ಯಜ್ಞದಲ್ಲಿ ಯಜಮಾನನ ಅಪೇಕ್ಷೆಗೆ ಅನುಗುಣವಾಗಿಯೇ ದೇವರು ಅನುಗ್ರಹಿಸುತ್ತಾನೆ. ಜಗತ್ತಿನಲ್ಲಿರುವವರೆಲ್ಲರೂ ಯಜ್ಞಕರ್ತರೇ ಆಗಿರುತ್ತಾರೆ. ಈ ಶರೀರವು ಯಜ್ಞಕ್ಕಾಗಿಯೇ ನಿರ್ಮಿಸಲ್ಪಟ್ಟಿದೆ, ಯಜ್ಞದಿಂದಲೇ ನಿರ್ಮಿಸಲ್ಪಟ್ಟಿದೆ ಹಾಗೂ ಯಜ್ಞಕ್ಕನುಸಾರವಾಗಿಯೇ ಪರಿವರ್ತನೆಯೂ ಆಗುತ್ತದೆ.

ಗರ್ಭದಲ್ಲಿರುವ ಶರೀರದಲ್ಲಿ 16 ಪಾರ್ಶ್ವದಂತಪಟಲಗಳೂ, 108 ಮರ್ಮಸ್ಥಳಗಳೂ, 800 ಸಂಧಿಗಳೂ, 900 ಸ್ನಾಯುಗಳೂ, 700 ಸಿರಗಳೂ, 500 ಮಜ್ಜಗಳೂ, 360 ಅಸ್ಥಿಗಳೂ, 45000000 (ನಾಲ್ಕು ಕೋಟಿ ಐವತ್ತು ಲಕ್ಷ) ರೋಮಗಳೂ ಇರುತ್ತವೆ. ಹೃದಯದ ಭಾರವು ಅಷ್ಟಫಲಮಿತವೂ, ನಾಲಗೆಯು 12 ಪಲಭಾರಯುಕ್ತವೂ, ಪಿತ್ತವು ಒಂದು ಪ್ರಸ್ಥಮಿತಂ (= 2 ಪಲಾ) ಕಫವು ಏಕಾಢರಮಿತವೂ, ಶುಕ್ರವು 1ಕುಡಮಿತ (¼ ಪ್ರಸ್ಥಮಿತ), ವೇದವು 2 ಪ್ರಸ್ಥಮಿತ, ಮೂತ್ರ-ಮಲವು ಆಹಾರಪರಿಮಾಣವನ್ನು ಅವಲಂಬಿಸಿರುತ್ತದೆ.

ವೃಕ್ಷರೂಪವಾದ ಈ ಶರೀರದಲ್ಲಿ 72 ನಾಡಿಗಳಿವೆ. ಅವುಗಳಲ್ಲಿ ಇಡಾ, ಪಿಂಗಲಾ, ಸುಷುಮ್ನಾ ನಾಡಿಗಳು ಮುಖ್ಯವಾದವುಗಳು. ಜೀವನಾಡಿಗಳ ಮೇಲೆ ಪಿತ್ತಕೋಶಗಳಿರುತ್ತವೆ. ಸ್ವೀಕರಿಸಿದ ಆಹಾರವು ಮೂತ್ರ, ಪುರೀಷಸಾರರೂಪವಾಗಿ (ಮಲಮೂತ್ರವಾಗಿ) ಪರಿವರ್ತಿಸಲ್ಪಡುತ್ತದೆ. ಸಾರವು ಪಂಚವಿಧ. ಅದು ಅಶರೀರವಾಗಿರುತ್ತದೆ. ಆಹಾರ ಮತ್ತು ಪಾನೀಯದಿಂದ ರಕ್ತ ಮತ್ತು ಶುಕ್ರದ ನಿರ್ಮಾಣವಾಗುತ್ತದೆ. ಪ್ರಾಣರೂಪದಲ್ಲಿ ಸಂಚರಿಸುವ ವಾಯುವೇ ಸೂತ್ರಾತ್ಮವಾಗಿದೆ. ವಾಯುವಿನಿಂದ ರಕ್ತವು ನಾಡಿಯಲ್ಲಿ ಹರಿಯುತ್ತದೆ. ರಸರೂಪವಾದ ಆಹಾರವು ತಾಯಿಯ ಗರ್ಭದಲ್ಲಿರುವ ಶಿಶುವಿನ ಪ್ರಾಣ ಮತ್ತು ಸುಷುಮ್ನಾ ನಾಡಿಯಿಂದ ಪ್ರವಹಿಸುತ್ತದೆ. ಸುಷುಮ್ನಾ ನಾಡಿಯನ್ನು ಬ್ರಹ್ಮನಾಡಿಯೆಂದು ಕರೆಯುತ್ತಾರೆ. ಪ್ರಾಣವು ಅಲ್ಲಿಯೇ ಇರುತ್ತದೆ. ಶಿಶುವಿನ ಜನನದ ವೇಳೆ ಪ್ರಾಣವು ಹೃದಯದಲ್ಲಿ ನೆಲೆಸುತ್ತದೆ.

ಇದೇ ಗರ್ಭೋಪನಿಷತ್ತಿನ ಸಾರ.

ಸಂಸ್ಕೃತ ಮೂಲ : ಎನ್.ಗಣೇಶ್
ಕನ್ನಡಕ್ಕೆ : ಆರ್.ಶಶಿಕಲಾ

Comments

Popular posts from this blog

ಉಮಾಸಹಸ್ರಮ್ ನಾಲ್ಕನೇ ಶತಕ

ಉಮಾಸಹಸ್ರಂ ಪಂಚಮ ಶತಕ